
ದೊಡ್ಡಬಳ್ಳಾಪುರ: ಪಾಕಿಸ್ತಾನ ಮೂಲದ ಗ್ಯಾಂಗ್ಸ್ಟರ್ಗಳ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ನನ್ನು ಬಂಧಿಸಿದ್ದಾರೆ.
ಕೌಂಟರ್ ಇಂಟಲಿಜೆನ್ಸ್ ಸೆಲ್ ಹಾಗೂ ಸೆಂಟ್ರಲ್ ಐಬಿ ಅಧಿಕಾರಿಗಳಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸೈಯದ್ ಅಬೂಬಕರ್ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಸೈಯದ್ ಅಬೂಬಕರ್ ಎಸಿ ರಿಪೇರಿ ಕೆಲಸ ಮಾಡಿಕೊಂಡಿದ್ದ. ಇದರ ಜೊತೆಗೆ ಬೆಂಗಳೂರಿನ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗ್ಯಾಂಗ್ ಸದಸ್ಯರ ಸೂಚನೆಯಂತೆ ಆತ ಕೇರಳ ಹಾಗೂ ದೆಹಲಿಗೆ ತೆರಳಿ ತರಬೇತಿಯನ್ನೂ ಪಡೆದುಕೊಂಡು ಬಂದಿದ್ದ ಎನ್ನಲಾಗಿದೆ.
ಆರೋಪಿಯ ವಿರುದ್ಧ ಬಿಎನ್ಎಸ್ ಸೆಕ್ಷನ್ 113(3) ಹಾಗೂ 197(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಲಾಂಪುರ ನಿವಾಸಿ ಸಯ್ಯದ್ ಅಬೂಬಕರ್ (25), ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಾಜವಿರೋಧಿ ಹಾಗೂ ತೀವ್ರಗಾಮಿತ್ವ ಹೊಂದಿರುವ ವ್ಯಕ್ತಿಯೊಬ್ಬರೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು.
ಆಗಸ್ಟ್ 20ರಂದು ಬೆಳಿಗ್ಗೆ 11ರ ಸುಮಾರಿಗೆ ಟೌನ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ರೂಪೇಶ್ ಯಾದವ್ ಅವರು ಇಸ್ಲಾಂಪುರದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಪೊಲೀಸ್ ಭಾತ್ಮೀದಾರರಿಂದ ಈ ಕುರಿತು ಮಾಹಿತಿ ಲಭಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಸಯ್ಯದ್ ಅಬೂಬಕರ್ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದ್ದು, ಬಿ.ಎನ್.ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಆರೋಪಿಯನ್ನು ಬಂಧಿಸಿಈ ಹಿನ್ನೆಲೆಯಲ್ಲಿ ಆರೋಪಿಯ ಚಟುವಟಿಕೆಗಳು ಹಾಗೂ ಪಾಕಿಸ್ತಾನಿ ಗ್ಯಾಂಗ್ನೊಂದಿಗಿನ ಸಂಪರ್ಕದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




